ಮೈಸೂರಿನ ಉದಯಗಿರಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆಬ್ರವರಿ 9ರಂದು ರಾತ್ರಿ ನಡೆದಿದ್ದ ಗಲಭೆ ಭಯದ ವಾತಾವರಣ ನಿರ್ಮಿಸಿ ಬಿಟ್ಟಿದೆ.. ಈ ಮಧ್ಯೆ ಕಲ್ಲು ಎಸೆದು ದುಷ್ಕೃತ್ಯ ಮೆರೆದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಗಲಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನು ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಎಫ್ಐಆರ್ನಲ್ಲಿ ಉಲ್ಲೆಖವಾಗಿದೆ.ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ, ಪೊಲೀಸ್ ಇಲಾಖೆಗೆ ಸಂಬಂದಿಸಿದ ವಾಹನಗಳಿಗೆ ಹಾನಿ, ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದರಿಂದ ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಕಲ್ಲು ತೂರಾಟ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮುಸ್ಲಿಂ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಉದಯಗಿರಿ ಪೊಲೀಸ್ ಠಾಣಾ ಪಿಎಸ್ಐ ಸುನೀಲ್ ಸಿ.ಎನ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


