ಇಂಡಿ:feb 2025- ಸಾರ್ವಜನಿಕ ಸರ್ಕಾರಿ ರಸ್ತೆ ಅಳತೆ ಮಾಡಲು ಹೋದ ಭೂಮಾಪಕರೊಬ್ಬರಿಗೆ ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಲೋಣಿ (ಬಿ.ಕೆ.) ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಗ್ರಾಮದ ಸರ್ವೇ ನಂ 341 ಮತ್ತು 342ರಲ್ಲಿನ ಸರ್ಕಾರಿ ರಸ್ತೆ ಅಳತೆ ಸಲುವಾಗಿ ಚಡಚಣ ತಹಶೀಲ್ದಾರ್ ಆದೇಶದಂತೆ ಭೂಮಾಪನ ಇಲಾಖೆಯ ಭೂಮಾಪಕ ಮಹಾಂತಪ್ಪ ಶ್ರೀಶೈಲ ಸಜ್ಜನ ಸ್ಥಳಕ್ಕೆ ಹೋಗಿದ್ದಾರೆ.
ಅವರ ಮೇಲೆ ಗ್ರಾಮದ ವಿಕಾಸ ಕಲ್ಲಣ್ಣಗೌಡ ಪಾಟೀಲ, ರವೀಂದ್ರ ಗುರಪ್ಪ ಕಾಂಬ್ಳೆ, ಸಿದ್ದರಾಮ ಗಿರಮಲ್ಲ ಉಟಗಿ, ವಿಕಾಸ ಜೀವಪ್ಪ ಕಾಂಬಳೆ ಹಾಗೂ ಇತರರು ಬಂದು ಅಳತೆ ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯನ್ನು ಖಂಡಿಸಿ ಭೂಮಾಪನ ಇಲಾಖೆಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಇಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


