ಕಲ್ಲು ಮತ್ತು ಗ್ರಾನೈಟ್ ಉದ್ಯಮದ ವಹಿವಾಟನ್ನು ₹ 50 ಸಾವಿರ ಕೋಟಿಯಿಂದ ₹ 1 ಲಕ್ಷ ಕೋಟಿಗೆ ವಿಸ್ತರಿಸಲು ಸಹಕಾರಿಯಾಗಿರುವ ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ನೀಡಬೇಕು ಎಂದು ರಾಜಸ್ಥಾನದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಕೃಷ್ಣ ಕುಮಾರ್ ವಿಷ್ಣೋಯ್ ಹೇಳಿದರು.ಫೆಡರೇಶನ್ ಆಫ್ ಇಂಡಿಯನ್ ಗ್ರಾನೈಟ್ ಆ್ಯಂಡ್ ಸ್ಟೋನ್ ಇಂಡಸ್ಟ್ರಿ (ಎಫ್‌ಐಜಿಎಸ್‌ಐ) ಆಯೋಜಿಸಿರುವ ಸ್ಟೋನಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಈ ಮೇಳವು ಕುಶಲಕರ್ಮಿಗಳಿಗೆ ವೇದಿಕೆ ಒದಗಿಸುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಕಲ್ಲು ಉದ್ಯಮದ ವಿವಿಧ ಪಾಲುದಾರರನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸಲು ಸ್ಟೋನಾ ಮೇಳ ಸಹಕಾರಿಯಾಗಿದೆ. ಕ್ವಾರಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಂತ್ರಜ್ಞಾನದ ಮೂಲಕ ಸಂಸ್ಕರಿಸಬೇಕು. ತಮ್ಮ ಉತ್ಕೃಷ್ಟತಾ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಜಾಗತಿಕ ಅಭಿವೃದ್ಧಿಯ ವಿವಿಧ ಅಂಶಗಳನ್ನು ಪರಿಶೀಲಿಸಬೇಕು’ ಎಂದು ಎಫ್ಐಜಿಎಸ್ಐಗೆ ಸಲಹೆ ನೀಡಿದರು.


